Tuesday, 6 March 2012

ಬಸ್ಸು ಪುರಾಣ

ಬೆಂಗಳೂರಿಂದ ಬಂದ ಬಸ್ಸಿಳಿದು ನಮ್ಮ ಶಿರಸಿಯ ಕಿಷ್ಕಿಂಧೆ ಹಳೆ ಬಸ್ ಸ್ಟಾಂಡಿಗೆ ಓಡೋಡಿ ಬಂದು ಬಸ್ಸು ಹತ್ತಿದೆ. ಹತ್ತಿ ಅಂತೂ ಇಂತೂ ಸ್ಥಳ ದೊರೆತು ಕುಳಿತುಕೊಂಡೆ. ಏನೋ ಕಳೆದುಕೊಂಡ ವಸ್ತು ಸಿಕ್ಕಿದ ಭಾವ! ಅಷ್ಟರಲ್ಲಿ ಶಿರಸಿ ಬಸ್ ಸ್ಟಾಂದಿನ ಬಸ್ ೩೩೭ ಚಿಪಗೇರಿ ಎನ್ನುವ ಎಂದಿಗೂ ಬದಲೇ ಆಗದ ಧಾಟಿಯ ಘೋಷಣೆ. ನನಗೆ ನನ್ನ ಭಾವ ಸ್ಪಷ್ಟವಾಗತೊಡಗಿತ್ತು.. ಆಕಡೆಯಿಂದ ಕೇಳುತ್ತಿದ್ದ ಟೆಂಪೊ ಸ್ಟಾಂದಿನ ಗಲಾಟೆ, ಕಣ್ಣಿಗೆ ಕಾಣುತ್ತಿದ್ದ ಪರಿಚಿತವೇ ಎನ್ನಿಸುವಂತಹ ಮುಖಗಳು ಅಹಾ!! ನನ್ನೂರಿಗೆ ಸ್ವಾಗತ ಕೋರಿದವು. ಏನೋ ಲಹರಿ ಬಂದು ಕಣ್ಣಿಗೆ ಕಂಡವುಗಳನ್ನು ಬರೆದೆ. ಬರ್‍ಎದು ಮುಗಿಸಿದ ತಕ್ಷಣ ಎನೋ ಒಂದು ತರಹದ ಮಣ್ಣಿನ ಸೊಗಡಿದೆ ಎನ್ನಿಸಿತು. ಆ ಸಾಲುಗಳನ್ನೇ ಯಥಾವತ್ತಾಗಿ ಇಲ್ಲಿಟ್ಟಿದ್ದೆನೆ, ಓದಿ ಹೇಗಿದೆ ಎಂದು ತಿಳಿಸಿ..



ಅವಳ ತಲೆಯ ಹೂವು ನೋಡಿ, ಮನೆಯ ಹೂವಿನ ಗಿಡಗಳ ಬಗ್ಗೆ ಮಾತು..

ಬೆಂಗಳೂರಿನಿಂದ ಬಂದ ಹಳೆ ಗೆಳತಿಯನ್ನು ಯಾವಾಗ ಬಂದ್ಯೆ ಎಂದು ಮಾತಾಡಿಸುವ ಸಂಭ್ರಮ..

ಅಮ್ಮನ ಹತ್ತಿರ ಕಾರಣವಿಲ್ಲದೆ ಜಗಳ ಮಾಡಿ, ಏನೂ ತಿನ್ನದೆ ಕಾಲೇಜಿಗೆ ಉಪವಾಸ ಬಂದ ಹುಡುಗಿ ಆಕಡೆ ಈಕಡೆ ನೋಡಿ ಚೀಲದಲ್ಲಿದ್ದ ಚಾಕ್ಲೆಟ್ ಬಾಯಿಗೆ ಹಾಕಿಕೊಂಡಳು..

ಮೊಬೈಲಿನಿಂದ ಚಿಕ್ಣಿ ಚಮೇಲಿ ಹಾಡು ಹಾಕಿದ ಹುಡುಗನೆಡೆಗೆ ಎಲ್ಲ ಹುಡುಗಿಯರ ಕಣ್ಣೋಟ. ಅಂತೆಯೇ ದೊಡ್ದವರ ಕಾಮೆಂಟುಗಳು..

ಆಗತಾನೆ ಪ್ರೀತಿ ಮೂಡಿದ ಅವನ ಇವಳ ಮೆಚ್ಚುಗೆಯ ನೋಟಗಳು..

ಘಟ್ಟ ಹತ್ತಲಾಗದ ಬಸ್ ದೂಡಲು ದಡಬಡ ಇಳಿಯುವ ಕಾಲೇಜ್ ಪಡ್ಡೆಗಳು, ಬಸ್ಸೊಳಗೆ ಕೂತು ಆಜ್ಞಾಪಿಸುವ ಹೆಗಡೆಗಳು

ಗಡ್ಡ ಬಿಟ್ಟ ಮುಸ್ಲಿಮ್ ಚಾಲಕನ ಎದುರಿಗಿನ ಧರ್ಮಸ್ಥಳ ಮಂಜುನಾಥನನ್ನು ಸ್ತುತಿಸುವ ಪಟಗಳು..

ಮಹಿಳಾ ಕಂಡಕ್ಟರನ್ನು 'ಟಿಕೆಟ್' ಎಂದು ಅನುಕರಿಸಿ ಗೇಲಿ ಮಾಡಿ ನಗುವ ಇಬ್ಬರು..

ಹಸಿ ಕಡಲೆಯನ್ನು ಬಿಡಿಸಿಕೊಂಡು ತಿನ್ನುತ್ತಿದ್ದ  ಅವಳದೇ ಪ್ರಾಯದ ಹುಡುಗಿಯೆಡೆಗೆ ನೋಡುತ್ತಿದ್ದ ನಾಲ್ಕು ವರ್ಷದ ಪೋರಿ
ಒಂದರ  ದುಡ್ಡಿಗೆ ನಾಲ್ಕು ಕಿತ್ತಳೆ ಕೊಡುವೆ ಅದೂ ಥೇಟ್ ಸಕ್ಕರೆಯಂತೆ ಎಂದ ಕಿತ್ತಲೆ ಮಾರುವ ಅಜ್ಜ. ಹಾಗಾದ್ರೆ ನಾಗಜ್ಜನ ಅಂಗಡಿಯಲ್ಲಿ ಸಕ್ರೆನೇ ತಗೊಳೋಣ ಎಂದು ಹಟ ಮಾಡ್ತಿದ್ದ ಮಗಳ ಸುಮ್ಮನಿರಿಸಿದ ಅಮ್ಮ..
.
ಅವನ ಬಗ್ಗೆ ಪಕ್ಕದಲ್ಲಿ ನಿಂತ ಅವನಿಗೇ ತಿಳಿಯದಂತೆ ಮಾತಾಡಿ ನಗುವ ಹುಡುಗಿಯರು..

ಮನೆ ಸೇರುವ ಮುನ್ನ ತಿಂದ ಗುಟಖಾ ವಾಸನೆ ಹೋಗಿಸಲು ಪರದಾಡುವ  ನಮ್ಮೂರಿನ ಡೀಸೆಂಟ್ ಹುಡುಗರು..

ಕೈಲೊಂದು ಬಗಲಲ್ಲೊಂದು ಮಕ್ಕಳನ್ನು ಎತ್ತಿಕೊಂಡು ಬಂದ ತಾಯಿಗೆ ಜಾಗ ಬಿಟ್ಟುಕೊಟ್ಟ ಪುಟ್ಟ ಉದಾರಿ

ಮಳೆ ಬೆಳೆ ಕಾಳು ಕಡಿಗಳ ಬಗ್ಗೆ ರಾಗ ಎಳೆಯುವ ಹೆಂಗಸರು

ನಿಮ್ಮನೆ ಅಡಿಕೆಗೆ ಏಷ್ಟು ಬಂತೋ ಭಾವ ಅಂತಲೇ ಮಾತಿಗಿಳಿಯುವ ಗಂಡಸರು

ಎಲ್ಲೂ ಇಲ್ಲದ ಸೈಕ್ಲೋನ್ ಬಗ್ಗೆ ಮಾತನಾಡುವ ಬುದ್ಢಿಜೀವಿಗಳು

ಮುಂದಿನ ಪಂಚಾಯಿತಿ ಚುನಾವಣೆಯ ಬಗ್ಗೆ ಚರ್ಚೆಗಳೂ..

ಪಕ್ಕದಲ್ಲಿ ಕುಳಿತ ಕಾಲೇಜ್ ಹುದುಗಿಯನ್ನು ಅದೂ ಇದೂ ಮಾತನಾಡಿಸಿ, ಎಂತದೋ ಬಾದರಾಯಣ ಸಂಬಂಧ ಹುಡುಕಿ ನಿನ್ನಮ್ಮ ಎಂತಾ ಮಾಡ್ತು ಕೇಳುವ ಅತ್ತೆಗಳು....


ನನ್ನ ಇಳಿಯುವ ಸ್ಥಳದ ಪರಿವೆಯೇ ಇರಲಿಲ್ಲ ನನಗೆ...

4 comments:

  1. Hwayyyy,,, neen bangalore ninda hopast hotge elli battu chipageri bus ?>?????

    ReplyDelete
    Replies
    1. :) ರಾತ್ರೆ ಶಿವಮೊಗ್ಗ ರೈಲಿಗೆ ಹೋದ್ರೆ ಅಷ್ಟು ಹೊತ್ತೇ ಆಗ್ತು .

      Delete
  2. ಬಸ್ ಪುರಾಣ ಚಂದ ಉಂಟು ಮಾರಾಯ್ತಿ :-)

    ReplyDelete